ಪೂಜನೀ -
	ಪುರಾಣಗಳಲ್ಲಿ (ಹರಿ, ಶಾಂತಿ) ಬರುವ ಒಂದು ಹಕ್ಕಿ ಕಾಂಪಿಲ್ಯ ನಗರದ ರಾಜ ಬ್ರಹ್ಮದತ್ತನ ಚಂದ್ರಶಾಲೆಯಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿತ್ತು. ಅದು ಹಗಲು ಹೊತ್ತು ದೇಶದೇಶಗಳನ್ನು ಸುತ್ತಿ ಸಂಜೆಗೆ ಅರಮನೆಗೆ ಬಂದು ರಾಜನಿಗೆ ಪ್ರಪಂಚದ ಸಮಾಚಾರವನ್ನು ತಿಳಿಸುತ್ತಿತ್ತು. ಹೀಗಿರಲು ರಾಜನಿಗೆ ಆತನ ಪತ್ನಿ ಸನ್ನತಿಯಲ್ಲಿ ಸರ್ವಸೇನನೆಂಬ ಒಬ್ಬ ಮಗ ಹುಟ್ಟಿದ. ಅದೇ ಸಮಯದಲ್ಲಿ ಹಕ್ಕಿಯೂ ಒಂದು ಮೊಟ್ಟೆ ಇಟ್ಟು ಮರಿ ಮಾಡಿತು. ಅಂದಿನಿಂದ ಅದು ಪ್ರತಿ ದಿನ ಅಮೃತ ತುಲ್ಯವಾದ ಎರಡು ಹಣ್ಣುಗಳನ್ನು ತಂದು ಒಂದನ್ನು ರಾಜಪುತ್ರ ಸರ್ವಸೇನನಿಗೂ ಇನ್ನೊಂದನ್ನು ತನ್ನ ಮರಿಗೂ ಕೊಡುತ್ತಿತ್ತು. ಇದರಿಂದ ಹಕ್ಕಿಯ ಮರಿಯೂ ರಾಜಕುಮಾರನೂ ಆಪ್ತ ಸ್ನೇಹಿತರಂತೆ ಬೆಳೆದರು. ಅಮೃತ ಫಲಗಳ ಸೇವನೆಯಿಂದ ಆ ಮರಿಗೂ ರಾಜಕುಮಾರನಿಗೂ ಅಗಾಧವಾದ ಕಾಂತಿಯೂ ಸತ್ವವೂ ಉಂಟಾದವು. ಒಂದು ದಿನ ಆಟದ ಉದ್ರೇಕದಲ್ಲಿ ರಾಜಕುಮಾರ ಹಕ್ಕಿ ಮರಿಯ ಕತ್ತನ್ನು ಹಿಚುಕಿಬಿಟ್ಟ. ಸಂಜೆ ಗೂಡಿಗೆ ಬಂದ ತಾಯಿ ಹಕ್ಕಿ ನಡೆದ ವಿದ್ಯಮಾನವನ್ನು ಗ್ರಹಿಸಿ ಸರ್ವಸೇನನ ಕಣ್ಣುಗಳನ್ನು ಕುಕ್ಕಿ ಕುರುಡನನ್ನಾಗಿಸಿ ಅಲ್ಲಿಂದ ದೂರ ಹಾರಿಹೋಯಿತು. ಅದರಿಂದ ಸರ್ವಸೇನನಿಗೆ ಪಟ್ಟ ತಪ್ಪಿತು. ಆತನ ತಮ್ಮ ವಿಷ್ವಕ್ಸೇನನೇ ಮುಂದೆ ರಾಜನಾದ.        
											(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ